ಪೊವೆಲ್, ಸಿಸಿಲ್ ಫ್ರ್ಯಾಂಕ್
	(1903-69).  ಇಂಗ್ಲೆಂಡಿನ ಭೌತವಿಜ್ಞಾನಿ.  ಜನನ 1903 ಡಿಸೆಂಬರ್ 5ರಂದು.  ಕೆಂಟ್‍ನಲ್ಲಿರುವ ಸ್ಥಳೀಯ ಶಾಲೆಯಲ್ಲಿ ಶಿಕ್ಷಣ ಮುಗಿಸಿ ಕೇಂಬ್ರಿಜಿನ ಸಿಡ್ನಿ ಸಸೆಕ್ಸ್ ಕಾಲೇಜು ಸೇರಿ ಪದವಿಗಳಿಸಿ (1925) ಕ್ಯಾವೆಂಡಿಷ್ ಲ್ಯಾಬೊರೇಟರಿಯನ್ನು ಪ್ರವೇಶಿಸಿದರು.  ಅಲ್ಲಿ ಲಾರ್ಡ್ ರುದರ್ಫರ್ಡ್ ಮತ್ತು ಸಿ.ಟಿ.ಆರ್. ವಿಲ್ಸನೆ ಇವರಂಥ ಮೇದಾವಿಗಳ ಜೊತೆ ಸಹಯೋಗ ಒದಗಿತು.  ವಿಲ್ಸನ್ನರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಸಾಂದ್ರೀಕರಣ ವಿದ್ಯಮಾನವೆಂಬ ವಿಷಯದ ಮೇಲೆ ಲೇಖನ ಬರೆದು ಡಾಕ್ಟೊರೇಟ್ ಪಡೆದರು (1927).  ವಿಲ್ಸನ್ ಮೇಘಮಂದಿರದಲ್ಲಿ ಈ ವಿದ್ಯಮಾನದ ಪಾತ್ರ ಮುಖ್ಯವಾದದ್ದು.  ಅದೇ ವರ್ಷ ಬ್ರಿಸ್ಟಲ್ ವಿಶ್ವವಿದ್ಯಾಲಯವ£z ಟಿಂಡಾಲರ ಬಳಿ ಸಂಶೋಧನ ಸಹಾಯಕರಾಗಿ ಸೇರಿ ಕೊನೆಯತನಕ ಅಲ್ಲೇ ಇದ್ದರು.  1948ರಲ್ಲಿ ಭೌತವಿಜ್ಞಾನದ ಮೆಲ್ ವಿಲ್ ವಿಲ್ಸ್ ಪ್ರಾಧ್ಯಾಪಕರಾಗಿಯೂ 1964ರಲ್ಲಿ ಹೆರ್ನಿ ಓವರ್ಟನ್ ವಿಲ್ಸ್ ಪ್ರೊಫೆಸರ್ ಮತ್ತು ಎಚ್. ಎಚ್. ವಿಲ್ಸ್ ವಿಲ್ಸ್ ಫಿಸಿಕ್ಸ್ ಲ್ಯಾಬೊರೇಟರಿಯ ನಿರ್ದೇಶಕ ಆಗಿಯೂ ನೇಮಕಗೊಂಡರು.  1950ರ ಸಾಲಿನ ಭೌತವಿಜ್ಞಾನ ವಿಭಾಗದ ನೋಬೆಲ್ ಪಾರಿತೋಷಿಕ ಇವರಿಗೆ ದೊರೆಯಿತು.

	ಫೋಟೋಗ್ರಾಫಿಕ್ ಇಮಲ್ಶನ್ ತಂತ್ರ ಉಪಯೋಗಿಸಿ ವೇಗದಲ್ಲಿ ಚಲಿಸುವ ವಿದ್ಯುದಾವಿಷ್ಟ ಕಣಗಳ ಪಥದ ಪಡಿಯಚ್ಚನ್ನು ಪಡೆದುಕೊಳ್ಳುವ ಸಾಧ್ಯತೆಯ ಬಗ್ಗೆ 1930ರ ದಶಕದ ಕೊನೆಯಲ್ಲಿ ಸಂಶೋಧನೆ ಆರಂಭಿಸಿದರು.  ಪಥವನ್ನು ರೂಪಿಸುವ ಕಣಗಳ ರಾಶಿ, ಆವೇಶ ಮತ್ತು ಶಕ್ತಿ ಇವನ್ನು ನಿರ್ಧರಿಸುವ ಒಂದು ವಿಧಾನ ಈ ಸಂಶೋಧನೆಯಿಂದ ಅಭಿವೃದ್ಧಿಗೊಂಡಿತು.  ಹಿಂದೆ ಯೂಕಾವಾ ಎಂಬ ವಿಜ್ಞಾನಿ ಇದೆ ಎಂದು ಊಹಿಸಿದ್ದ ಪೈಯಾನ್ ಎಂಬ ಕಣವನ್ನು ಇವರೂ ಇವರ ಸಹಕಾರ್ಯಕರ್ತರೂ ಒಟ್ಟಾಗಿ ಆವಿಷ್ಕರಿಸಿದರು.  ಈ ಸಾಧನೆಗಳು ಪ್ರಾಥಮಿಕ ಕಣಭೌತ ವಿಜ್ಞಾನವೆಂಬ ಹೊಸ ವಿಭಾಗದ ಬೆಳವಣಿಗೆಗೆ ಕಾರಣವಾದುವು.  1969 ಆಗಸ್ಟ್ 7 ರಂದು ಇಟಲಿಯಲ್ಲಿ ನಿಧನರಾದರು.	(ಎಸ್.ಪಿ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ